Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!
Showing posts with label yen. Show all posts
Showing posts with label yen. Show all posts

Mannaru Krishnage Mangala / ಮನ್ನಾರು ಕೃಷ್ಣಗೆ ಮಂಗಳ

June 22, 2011


Composer: Purandara Daasa

ಮನ್ನಾರು ಕೃಷ್ಣಗೆ ಮಂಗಳ
ಜಗವ ಮನ್ನಿಸಿದೊಡೆಯಗೆ ಮಂಗಳ ||ಪಲ್ಲವಿ||

ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆ
ಕಮ್ಮಗೋಲನಯ್ಯಗೆ ಮಂಗಳ
ಧರ್ಮರಕ್ಷಕನಿಗೆ ದಾನವಶಿಕ್ಷಗೆ
ನಮ್ಮ ರಕ್ಷಕನಿಗೆ ಮಂಗಳ ||1||

ತುರುಗಳ ಕಾಯ್ದಗೆ ಕರುಣಾಕರನಿಗೆ
ಗಿರಿಯನೆತ್ತಿದವಗೆ ಮಂಗಳ
ವರದ ತಿಮ್ಮಪ್ಪಗೆ ವಾರಿಜನಾಭಗೆ
ಹರಿ ಸರ್ವೋತ್ತಮನಿಗೆ ಮಂಗಳ||2||

ದೇವಕಿದೇವಿಯ ತನಯಗೆ ಮಂಗಳ
ದೇವ ತಿಮ್ಮಪ್ಪಗೆ ಮಂಗಳ
ಮಾವನ ಕೊಂದು ಮಲ್ಲರ ಮಡುಹಿದ
ಪುರಂದರವಿಠಲಗೆ ಮಂಗಳ||3||

[ಮನ್ನಾರು - ಮನೋಹರ, ಸುಂದರ]


Audio Link by Roopa deepa

Smarane Onde Salade Govindana / ಸ್ಮರಣೆ ಒಂದೇ ಸಾಲದೆ

June 6, 2011

Composer: Purandara Daasa


ಸ್ಮರಣೆ ಒಂದೇ ಸಾಲದೆ ಗೋವಿಂದನ
ನಾಮ ಒಂದೇ ಸಾಲದೆ ||ಪಲ್ಲವಿ||

ಪರಮ ಪುರುಷನನ್ನು ನೆರೆ ನಂಬಿದವರಿಗೆ
ದುರಿತ ಬಾಧೆಗಳ ಗುರುತು ತೋರುವುದೆ ||

ಕಡು ಮೂರ್ಖನಾದರೇನು ದುಷ್ಕರ್ಮದಿಂ ತೊಡೆದಾತನಾದರೇನು
ಜಡನಾದರೇನಲ್ಪಜಾತಿಯಾದರೇನು
ಬಿಡದೆ ಪ್ರಹ್ಲಾದನ್ನ ಸಲಹಿದ ಹರಿಯ ||

ಪಾತಕಿಯಾದರೇನು ಸರ್ವಪ್ರಾಣಿ ಘಾತಕಿಯಾದರೇನು
ನೀತಿಯ ಬಿಟ್ಟು ದುಷ್ಕರ್ಮಿಯಾದರೇನು
ಪ್ರೀತಿಯಿಂದಜಾಮಿಳನ ಸಲಹಿದ ಹರಿಯ ||

ಸಕಲ ತೀರ್ಥಯಾತ್ರೆಯ ಮಾಡಿದಂಥ ನಿಖಿಲ ಪುಣ್ಯದ ಫಲವು
ಭಕುತಿ ಪೂರ್ವಕವಾಗಿ ಬಿಡದನುದಿನದಲ್ಲಿ
ಪ್ರಕಟ ಪುರಂದರ ವಿಠಲನ ನಾಮದ ||


1.Audio Link by Balamuralikrishna [song 6]

2.Audio Link by Roopa Deepa

3.Audio Link by Kurudi Venkannachar

4.Audio Link by Sangeetha Swaminathan [song 2]

5.Audio Link by PB Srinivas [song 4]

Ambiga naa ninna nambide / ಅಂಬಿಗಾ ನಾ ನಿನ್ನ ನಂಬಿದೆ

March 11, 2011


Composer: Purandara Daasa

ಪಲ್ಲವಿ
ಅಂಬಿಗ ನಾ ನಿನ್ನ ನಂಬಿದೆ ಜಗದಂಬಾರಮಣನ ನಿನ್ನ ನಂಬಿದೆ||

ಚರಣ

ತುಂಬಿದ ಹರಿಗೋಲಂಬಿಗ
ಅದಕೊಂಭತ್ತು ಛಿದ್ರವು ಅಂಬಿಗ
ಸಂಭ್ರಮದಿಂ ನೋಡಂಬಿಗ
ಅದರಿಂಬು ನೋಡಿ ನಡೆಸಂಬಿಗ||1||

ಹೊಳೆಯ ಭರವ ನೋಡಂಬಿಗ
ಅದಕೆ ಸೆಳವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ
ಎನ್ನ ಸೆಳೆದು ಕೊಂಡೊಯ್ಯೊ ನೀನಂಬಿಗ||2||

ಆರು ತೆರೆಯ ನೋಡಂಬಿಗ
ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ
ಅದ ನಿವಾರಿಸಿ ದಾಟಿಸೋ ಅಂಬಿಗ||3||

ಸತ್ಯವೆಂಬುದೆ ಹುಟ್ಟು ಅಂಬಿಗ
ಸದಾ ಭಕ್ತಿಯೆಂಬುದೆ ಪಥ ಅಂಬಿಗ
ನಿತ್ಯ ಮೂರುತಿ ಪುರಂದರ ವಿಟ್ಠಲ
ನಮ್ಮ ಮುಕ್ತಿ ಮಂಟಪಕೊಯ್ಯೊ ಅಂಬಿಗ||4||

OR
ಸತ್ವ ಪಥದೊಳಗೆ ಅಂಬಿಗ
ಪರಾ ಭಕ್ತಿ ಹುಟ್ಟನು ಹಾಕಿ ಅಂಬಿಗ
ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲನ
ಮುಕ್ತಿ ಮಂಟಪಕೊಯ್ಯೋ ಅಂಬಿಗ||4||


1.Audio Link by Vidya Bhushana[song1]

2.Audio Link by M.S.Sheela

3.Audio Link by a group

Onde Naamavu Saalade / ಒಂದೇ ನಾಮವು ಸಾಲದೆ

January 28, 2011

Composer: Purandara Daasa

ಒಂದೇ ನಾಮವು ಸಾಲದೆ ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೆ ||ಪ||

ಒಂದೇ ನಾಮವು ಭವಬಂಧನ ಬಿಡಿಸುವುದೆಂದು
ವೇದಂಗಳ ಆನಂದದಿ ಸ್ತುತಿಸುವ ||ಅಪ||

ಉಭಯರಾಯರು ಸೇರಿ ಸಮ್ಮತದಿ ಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕೆ ಕೈಯೆತ್ತಿ ದ್ರೌಪದಿ ಕೃಷ್ಣಾ ಎನ್ನಲು
ಇಭರಾಜ ಗಮನೆಗೆ ಅಕ್ಷಯ ವಸ್ತ್ರವನಿತ್ತ |1|

ಹಿಂದೊಬ್ಬ ಋಶಿ ಪುತ್ರನಂದು ದಾಸಿಯ ಕೂಡೆ
ಸಂದೇಹವಿಲ್ಲದೆ ಹಲವು ಕಾಲ
ದಂದುಗದೊಳು ಸಿಲುಕಿ ನಿಂದಂತ್ಯ ಕಾಲದಿ
ಕಂದ ನಾರಗನೆಂದು ಕರೆಯಲಭಯವಿತ್ತ |2|

ಕಾಶಿಯಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠಲನ್ನ |3|


1.Audio Link by Vidya Bhushana

2.Audio Link by Vidya Bhushana

3.Audio Link by Balamuralikrishna [song 10]

Dayamade Dayamade Taaye Vagdevi / ದಯಮಾಡೆ ತಾಯೆ ವಾಗ್ದೇವಿ

December 31, 2010


Composer: Jagannatha Daasa


ಪಲ್ಲವಿ
ದಯಮಾಡೆ ದಯಮಾಡೆ ತಾಯೆ ವಾಗ್ದೇವಿ ||

ಅನುಪಲ್ಲವಿ
ದಯದಿಂದ ನೀನೆನ್ನ ನೋಡೆ ವಾಗ್ದೇವಿ ||

ಚರಣ
ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ ||೧|

ಸುಮುಖೀ ತ್ವಚ್ಚರಣಾಬ್ಜ ದ್ರುಮಛಾಯಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ||೨||

ಜಗನ್ನಾಥವಿಠಲನ ಅಂಘ್ರಿಗಳ ಸೇವೆಯೊಳು
ಸುಗುಣೆ ಸನ್ಮತಿಕೊಟ್ಟು ಬೇಗೆನ್ನ ಸಲಹೆ||೩||


1.Audio Link by Balamurali Krishna

Maathu Maathige Keshava Narayana / ಮಾತು ಮಾತಿಗೆ

December 21, 2010


Composer: Vadirajaru

ಪಲ್ಲವಿ
ಮಾತು ಮಾತಿಗೆ ಕೇಶವ ನಾರಾಯಣ
ಮಾಧವ ಎನಬಾರದೆ ಹೇ ಜಿಹ್ವೆ ||

ಅನುಪಲ್ಲವಿ
ಪ್ರಾತಃಕಾಲದೊಳೆದ್ದು ಪಾರ್ಥಸಾರಥಿಯೆಂದು
ಪ್ರೀತಿಲಿ ನೆನೆಯೆ ಸುಪ್ರೀತನಾಗುವ ಹರಿಯ
ಏತಕ್ಕೆ ನೆನೆಬಾರದು ಹೇ ಜಿಹ್ವೆ ||

ಚರಣ
ಜಲಜನಾಭನ ನಾಮವು ಈ ಜಗಕ್ಕೆಲ್ಲ
ಜನನ ಮರಣಹರವು
ಸುಲಭವಾಗಿಹುದು ಸುಖಕೆ ಕಾರಣವಿದು
ಬಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು
ತಿಳಿದು ತಿಳಿಯದಿಹರೇ ಹೇ ಜಿಹ್ವೆ ||೧||

ತರಳೆ ದ್ರೌಪದಿ ಸೀರೆಯ ಸೆಳೆಯುತಿರೆ
ಹರಿ ನೀನೆ ಗತಿಯೆನಲು
ಪರಮ ಪುರುಷ ಭವಭಂಜನ ಕೇಶವ
ದುರುಳರ ಮರ್ದಿಸಿ ತರುಣಿಗೆ ವರವಿತ್ತ
ಹರಿನಾಮ ಪ್ರಿಯವಲ್ಲವೇ ಹೇ ಜಿಹ್ವೆ||೨||

ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲ
ನಾಮವೇ ಗತಿಯೆನಲು
ಪ್ರೇಮದಿಂದಲಿ ಬಂದು ಕಾಮಿತಾರ್ಥಗಳಿತ್ತ
ಸ್ವಾಮಿ ಹಯವದನನ ನಾಮವ ನೆನೆಯುತ್ತ
ಯಾಮ ಯಮಕೆ ಬಿಡದೆ ಹೇ ಜಿಹ್ವೆ||೩||


1.Audio Link byJayalakshmi Srinivasan

2.Audio Link by VidyaBhushana

Yake Nirdayanade / Yeke Nirdayanaade /ಯಾಕೆ ನಿರ್ದಯನಾದೆ

November 8, 2010



Composer : Purandara Dasa

ಪಲ್ಲವಿ
ಯಾಕೆ ನಿರ್ದಯನಾದೆ(ಯೋ) ಎಲೊ ದೇವನೆ (ಹರಿಯೇ)
ಶ್ರೀಕಾಂತ ಎನ್ನ ಮೇಲೆ ಎಳ್ಳಷ್ಟು ದಯವಿಲ್ಲ||

ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನ ಅಪ್ಪಿಕೊಂಡೆ
ಮಂಗಳಪದವಿತ್ತು ಮನ್ನಿಸಿದೆ ಅವ ನಿನಗೆ
ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ |1|

ಸಿರಿ ದೇವಿಗೆ ಹೇಳದೆ ಸೆರಗು ಸಂವರಿಸದೆ
ಗರುಡನ ಮೇಲೆ ಎರಗಿ ಗಮನವಾಗದೆ
ಭರದಿಂದ ನೀ ಬಂದು ಆತನ ಸಲಹಿದೆ
ಕರಿರಾಜ ಎಷ್ಟು ಕನಕವ ಕೊಟ್ಟನೋ ಹರಿಯೆ |2|

ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೇ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೆ
ಭಜನೆಗೆ ಅವರೇ ಹಿತರೆ ನಾ ನಿನಗೆ ಅನ್ಯನೇ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ |3|


1.Audio by M.L.Vasantha Kumari

2.Audio by Roopa, Deepa Kasaravalli

Harinamada aragiliyu / Harinamadaraginiyu / ಹರಿನಾಮದರಗಿಳಿಯು

November 2, 2010


ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು ||ಪ||

ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯ ಕೊಂಡೊಯ್ವುದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು |1|

ದಾರಿಯಲಿ ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿ ಪಟ್ಟಣಕೆ |2|

ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ
ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು
ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು|3|


1.Audio by Roopa Deepa Kasaravalli

2.Audio by Narasimha Nayaka [song 16]

Paalisemma Muddu Sharade / ಪಾಲಿಸೆಮ್ಮ ಮುದ್ದುಶಾರದೆ

October 2, 2010


ಪಾಲಿಸೆಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲಿ ನಿಲ್ಲ ಬಾರದೆ || ಪಲ್ಲವಿ ||

ಲೋಲಲೋಚನೆ ತಾಯೆ
ನಿರುತ ನಂಬಿದೆ ನಿನ್ನ || ಅನುಪಲ್ಲವಿ ||

ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ
ಏಳು ಲೋಕವ
ಸಾಕ್ಷಾತ್ ರೂಪದಿಂದ
ಒಲಿದು
ರಕ್ಷಿಸು ತಾಯೆ || ೧ ||

ಶೃಂಗಾರಪುರ ನೆಲೆವಾಸಿನೀ ದೇವಿ
ಸಂಗೀತಗಾನ ವಿಲಾಸಿನೀ
ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ || ೨ ||

ಸರ್ವಾಲಂಕಾರ ದಯಾಮೂರುತಿ ನಿನ್ನ
ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ || ೩ ||


1.Audio Link by M.S.Sheela (song6)

2.Audio Link by Upendra Bhat

3.Audio Link by H.K.Narayana

4.Audio link by Narasimha nayak[song 39]

Amba Tanaya Heramba / ಅಂಬ ತನಯ ಹೇರಂಬ

July 31, 2010




ರಚನೆ: ಜಗನ್ನಾಥ ದಾಸರು


ಅಂಬ ತನಯ ಹೇರಂಬ ಪೂರ್ಣ
ಕರುಣಾಂಬುಧೆ ತವ ಚರಣಕೆ ಎರಗುವೆ

ದಶನ ಮೋದಕ ಪಾಶಾಂಕುಶ ಪಾಣಿ
ಅಸಮಚಾರುದೇಷ್ಣ ಕುಸುಮನಾಭನ ಪುತ್ರ

ಬೃಂದಾರಕ ವೃಂದ ವಂದಿತ ಚರಣ
ಅರವಿಂದಯುಗಳ ದಯದಿಂದ ನೋಡೆನ್ನ
ಯೂಥಪ ವದನ ಪ್ರದ್ಯೋತ ಸನ್ನಿಭ
ಜಗನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ


1.Audio Link by M.S.Sheela [song1]

2.Audio link by Parameshwara hegde [song4]

3.Audio Link by G.V.Athri[song7]

Sharanu Benakane Kanaka Roopane / ಶರಣು ಬೆನಕನೆ

July 2, 2010


ರಚನೆ :ಪುರಂದರ ದಾಸ

ಶರಣು ಬೆನಕನೆ ಕನಕರೂಪನೆ ಕಾಮಿನಿ ಸಂಗದೂರನೇ
ಶರಣು ಸಾಂಬನ ಪ್ರೀತಿ ಪುತ್ರನೆ ಶರಣು ಜನರಿಗೆ ಮಿತ್ರನೆ

ಏಕದಂತನೆ ಲೋಕಖ್ಯಾತನೆ ಏಕವಾಕ್ಯ ಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನ ವಿನಾಯಕ [1]

ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯಯುತ ಗುಣಸಾರನೇ
ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ [2]

ಚತುರ್ಬಾಹು ಚರಣ ತೊಡಲನೆ ಚತುರ ಆಯುಧ ಧಾರನೇ
ಮತಿಯವಂತನೆ ಮಲಿನ ಜಲಿತನೆ ಅತಿಯ ಮಧುರಾಹಾರನೇ [3]

ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿ ಪ್ರದೀಪನೇ
ಚಕ್ರಧರ ಹರಬ್ರಹ್ಮಪೂಜಿತ ರಕ್ತ ವಸ್ತ್ರಾಧಾರನೇ [4]

ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ
ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ [5]


1.Audio Link by Parameshwara hegde (song 6)

2.Audio Link by Vidya bhushana (song 18)

3.Audio Link by M.S.Sheela(song 1)

4. Audio by a group of singers

Kande Kande Swamiya Bedikonde /ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ

June 25, 2010



ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ ||
ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ ಕರುಣಾನಿಧಿ ಎಂದೆನಿಸಿ ಮೆರೆವನ ||

ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು
ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ ತಿರುಮಣಿಯ ಕಂಡೆನು
ಸಾಟಿಯಿಲ್ಲದೆ ಚತುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕೇಳಿರೋ ಭೂರಿದೈವರ ಗಂಡನಂಘ್ರಿಯ||

ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ
ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನ ಸಾರ್ವಭೌಮನ ಅಪ್ಪ ವೆಂಕಟರಮಣನಂಘ್ರಿಯ ||

ಉರದಿ ಶ್ರೀ ದೇವಿಯಳ ಕಂಡೆನು ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರನಾರದಾದಿ ಗಂಧರ್ವರ ಎಡಬಲದಲಿ ಕಂಡೆನು
ತರತರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು
ಶರಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಘ್ರಿಯ ||


1. Audio Link by Balamurali Krishna (song 5)

2.Audio Link by Vidya Bhushana



ಕೆಲವು ಪದಗಳ ಅರ್ಥ:

ನೊಸಲು - ಹಣೆ,ನೆತ್ತಿ,ತಲೆಯ ಮಧ್ಯಭಾಗ,
ಬೂಟ - ಮೋಸ, ಕಪಟ
ಅಂಘ್ರಿ - ಹೆಜ್ಜೆ, ಪಾದ,ಕಾಲು
ಭೂರಿ - ಹೆಚ್ಚು, ಅಧಿಕ,ಚಿನ್ನ, ಹೊನ್ನು,ವಿಸ್ತಾರವಾದ, ವಿಶಾಲವಾದ
ಕ್ರಯ - ಬೆಲೆ, ಕಿಮ್ಮತ್ತು
ಓಗರ - ಬೇಯಿಸಿದ ಆಹಾರ, ಅನ್ನ
ತರ - ಸಾಲು,ಕ್ರಮ,ಯೋಗ್ಯವಾದುದು

Elu Narayanane / ಏಳು ನಾರಾಯಣನೇ

June 11, 2010



raaga: bowLi
taaLa: khanDa caapu
Composer: Kanaka Daasa
Language: KannaDa


ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶ
ಏಳಯ್ಯ ಬೆಳಗಾಯಿತು ||ಪಲ್ಲವಿ||

ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ ||1||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ ||2||

ದಾಸರೆಲ್ಲರು ಬಂದು ಧೂಳಿ ದರ್ಶನ ಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಹರಿಯೇ ||3||

-------------------------------------------------


pallavi
YeLu narayanane, elu lakshmimi ramana,
elu shri giriyoDeya, venkatesha,

Elayya belagayitu.

kaasidda haalannu kaavaDiyoLu heppiTTu
lesaagi kaDedu hosabeNNe koDuve
shesha shayanane ELu samudra mathanava maaDu
desha kempaayitu ELayya hariye (1)

araLu mallige jaaji, parimaLada pushpagaLa
suraru tandiddaare, balu bhakutiyinda
Aravindanaabha siri vidhi bhavaadigaLoDeya
lochana madhanagoplalakrishna
hiridaagi koLi koogitu, elayya hariye (2)

dasarellaru bandu, dhooLi darshana gonDu
lesaagi taaLa danDigeyanu piDidu
shreesha neleyaadi keshava nimma paadavanu
lesaagi smarisi pogaLuvaru hariye (3)



1. Audio Link by Vidya Bhushana (song 1)

2.Audio Link by Vidya Bhushana

Narasimhana Paada Bhajaneya Maado / ನರಸಿಂಹನ ಪಾದ ಭಜನೆಯ ಮಾಡೊ

May 21, 2010



ನರಸಿಂಹನ ಪಾದ ಭಜನೆಯ ಮಾಡೋ ||ಪ ||
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ||

ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ ||

ತರಳನ ಮೊರೆ ಕೇಳಿ ತ್ವರಿತದಲಿ ಬಂದು
ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ ||

ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಠಲ ||


Audio Link by Vidya Bhushana

Samanyavalla Sri Hariya Seve /ಸಾಮಾನ್ಯವಲ್ಲ ಶ್ರೀ ಹರಿಯ

May 5, 2010



Composer :Purandara Daasa
Raaga:Charukeshi

ಪಲ್ಲವಿ:
ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
ಪಾಮರ ಜನರಿಗೆ ಸಾಮಾನ್ಯವಲ್ಲ

ಅನುಪಲ್ಲವಿ:
ಸಾಮಜ ವರದನ ಪ್ರೇಮದಿ ನೆನೆವುದು
ತಾಮಸ ಬುದ್ಧಿಯ ತಾ ತಗ್ಗಿಸದೆ

ಚರಣ:
ಅಂತರ ಮಲಿನವು ಅಳಿಯಬೇಕು
ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ
ನಿರಂತರದಲಿ ತಾ ಚಿಂತಿಸ ಬೇಕು (1)

ಸರ್ವಾಂತರ್ಯಾಮಿ ಶ್ರೀ ಹರಿಯೆಂದು
ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಪುರಂದರ ವಿಠಲನ
ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು (2)

1.Audio Link by M.S.Sheela

2.Audio Link by Maharajapuram Santhanam

3.Audio Link by Nithyashree Mahadevan

Hari Kunida Namma / ಹರಿ ಕುಣಿದ ನಮ್ಮ

April 27, 2010


ಹರಿ ಕುಣಿದಾ ನಮ್ಮ ಹರಿ ಕುಣಿದ ||||

ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿ ಕುಣಿದ ||


ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ
ಚೆಂದದಿ ನಲಿಯುತ ಹರಿ ಕುಣಿದ ||


ಅಕಳಂಕಚರಿತ ಮಕರಕುಂಡಲಧರ
ಸಕಲರ ಪಾಲಿಪ ಹರಿ ಕುಣಿದ ||


ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
ದಿಟ್ಟ ಮಲ್ಲರ ಗಂಡ ಹರಿ ಕುಣಿದ ||


ಪರಮಭಾಗವತರ ಕೇರಿಯೊಳಾಡುವ
ಪುರಂದರವಿಠಲ ಹರಿ ಕುಣಿದ ||



1.Audio Link by Venkatesh Kumar (song 8)

2.Audio Link by Ranjani Nagaraj below

Venkatesha Bedikombe / ವೆಂಕಟೇಶ ಬೇಡಿಕೊಂಬೆ

March 25, 2010


ಪಲ್ಲವಿ
ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ
ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ

ಚರಣ
ನಷ್ಟ ಮೊದಲಾದಂಥ ಕಷ್ಟ ಬಿಡಿಸೊ
ನಿನ್ನ ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ
ಇಷ್ಟ ಭಕ್ತಜನರೊಳು ಎನ್ನ ಸೇರಿಸೊ
ಈ ಸೃಷ್ಟಿಯೊಳು ನಿನ್ನ ದಾಸಾನು ದಾಸನೆನಿಸೊ [೧]

ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ
ಪೊಂಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ
ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ
ಮುಂದೆ ಹುಟ್ಟಿ ಇಹ ಜನ್ಮಂಗಳ ಎನಗೆ ಬಿಡಿಸೊ [೨]

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ
ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ ಸ್ವಾಮಿ
ದಿಟ್ಟ ಪುರಂದರ ವಿಠಲನೆ ದಯದಿ ಪಾಲಿಸೊ [೩]


Audio Link by Balamurali Krishna

Laali Laali namma hariye laali / ಲಾಲಿ ಲಾಲಿ

February 16, 2010



ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ||
ಸುರ ನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ ||

ರಾಮ ಲಾಲಿ ಮೇಘಶ್ಯಾಮ ಲಾಲಿ
ರಮಾ ಮನೋಹರ ಅಮಿತ ಸದ್ಗುಣ ಧಾಮ ಲಾಲಿ ||

ಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿ
ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವ ಸಂತುಷ್ಟ ಲಾಲಿ ||

ರಂಗ ಲಾಲಿ ಮಂಗಳಾಂಗ ಲಾಲಿ
ಗಂಗೆಯ ಪಡೆದ ತುಂಗ ಮಹಿಮ ನರಸಿಂಗ ಲಾಲಿ ||

ನಂದ ಲಾಲಿ ಗೋಪಿ ಕಂದ ಲಾಲಿ
ಮಂದರ ಗಿರಿಧರ ಮಧುಸೂದನ ಮುಕುಂದ ಲಾಲಿ ||

ಶೂರ ಲಾಲಿ ರಣಧೀರ ಲಾಲಿ
ಮಾರನಯ್ಯ ನಮ್ಮ ವರ ಪುರಂದರವಿಠಲ ಲಾಲಿ ||


1.Audio Link by Vidya Bhushana

2.Audio Link by Ratnamala prakash

Dashavatara Mangalam /Jaya Mangalam Nitya Shubha Mangalam / ದಶಾವತಾರ ಮಂಗಳಂ

December 3, 2009



ರಚನೆ : ಪುರಂದರ ದಾಸರು
(ದಶಾವತಾರ ಆರತಿ)


ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||

ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ
ಸುಕಂಠಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಹಗೆ ||

ವಕ್ಷಕ್ಕೆ ಮಂಗಳ ವಟು ವಾಮನಗೆ
ಪಕ್ಷಕ್ಕೆ ಮಂಗಳ ಪರಶುರಾಮಗೆ
ಕಕ್ಷಕ್ಕೆ ಮಂಗಳ ಕಾಕುತ್ಸ್ಥರಾಮಗೆ
ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ ||

ಊರುಗಳಿಗೆ ಮಂಗಳ ಉತ್ತಮಬೌದ್ಧಗೆ
ಚರಣಕ್ಕೆ ಮಂಗಳ ಚೆಲುವ ಕಲ್ಕಿಗೆ
ಪರಿಪರಿ ರೂಪಗೆ ಪರಮಾನಂದಗೆ
ಪುರಂದರವಿಠಲಗೆ ಜಯಮಂಗಳಂ ||



Audio Link by Bombay Sisters

Anandamayage Chinmayage aarati ettire / ಆನಂದಮಯಗೆ ಚಿನ್ಮಯಗೆ

November 29, 2009


ರಚನೆ : ವಾದಿರಾಜರು

ಆನಂದಮಯಗೆ ಚಿನ್ಮಯಗೆ
ಶ್ರೀಮನ್ನಾರಾಯಣಗೆ ಆರತಿ ಎತ್ತಿರೆ

ವೇದವ ತಂದು ಬೆಟ್ಟವ ಪೊತ್ತು ಧರಣೀಯ
ಸಾಧಿಸಿ ಕಂಭದಿ ಬಂದವಗೆ
ಭೂದಾನವ ಬೇಡಿ ನೃಪರ ಸಂಹರಿಸಿದ
ಆದಿ ಮೂರುತಿಗೆ ಆರತಿ ಎತ್ತಿರೆ

ಇಂದುವದನೆ ಸೀತೆ ಸಹಿತಲರಣ್ಯದಿ
ನಂದಗೋಕುಲದಲ್ಲಿ ನಲಿದವಗೆ
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗೆ ಆರತಿ ಎತ್ತಿರೆ

ತುರಗವನೇರಿ ದೈತ್ಯರ ಸೀಳಿ ಸುಜನರ
ಪೊರೆವ ಮಂಗಳ ಹಯವದನನಿಗೆ
ವರದ ಯಾದವಗಿರಿ ಆದಿ ನಾರಾಯಣ
ಚರಣ ಕಮಲಕೆ ಆರತಿ ಎತ್ತಿರೆ


1.Audio Link by Vidya Bhushana

2.Audio Link by Narasimha Nayak (song 4)

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger