
ನರಸಿಂಹನ ಪಾದ ಭಜನೆಯ ಮಾಡೋ ||ಪ ||
ದುರಿತ ಪರ್ವತವ ಖಂಡಿಸುವ ಕುಲಿಶದಂತೆ ||ಅ||
ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ ||
ತರಳನ ಮೊರೆ ಕೇಳಿ ತ್ವರಿತದಲಿ ಬಂದು
ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ ||
ಹರಿ ವಿರಿಂಚಾರಾದ್ಯರು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಠಲ ||
Audio Link by Vidya Bhushana

ಹರಿ ಕುಣಿದಾ ನಮ್ಮ ಹರಿ ಕುಣಿದ ||ಪ||
ಅರಳೆಲೆಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿ ಕುಣಿದ ||
ಅಂದುಗೆ ಅರಳೆಲೆ ಬಿಂದುಲ್ಲಿ ಬಾಪುರಿ
ಚೆಂದದಿ ನಲಿಯುತ ಹರಿ ಕುಣಿದ ||
ಅಕಳಂಕಚರಿತ ಮಕರಕುಂಡಲಧರ
ಸಕಲರ ಪಾಲಿಪ ಹರಿ ಕುಣಿದ ||
ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ
ದಿಟ್ಟ ಮಲ್ಲರ ಗಂಡ ಹರಿ ಕುಣಿದ ||
ಪರಮಭಾಗವತರ ಕೇರಿಯೊಳಾಡುವ
ಪುರಂದರವಿಠಲ ಹರಿ ಕುಣಿದ ||
1.Audio Link by Venkatesh Kumar (song 8)
2.Audio Link by Ranjani Nagaraj below